![]() |
| ವಿಜಯಪುರದ ಸಂಗೀತ್ ಮಹಲ್ ಅರಮನೆ |
ಸುಮಾರು 200 ವರ್ಷ ವಿಜಯಪುರವನ್ನು ರಾಜಧಾನಿಯಾಗಿ ಮಾಡಿಕೊಂಡು ಆಳಿದ ಆದಿಲ್ ಶಾಹಿ ಸುಲ್ತಾನರು ಕಲೆ, ಸಾಹಿತ್ಯ ಮತ್ತು ಸಂಗೀತಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ವಿಜಯಪುರ ಹೊರವಲಯದಲ್ಲಿರುವ ಸಂಗೀತ ಮಹಲ್, ಒಬ್ಬ ಸುಲ್ತಾನನ ಸಂಗೀತಪ್ರೇಮದ ನೆನಪಾಗಿ ಇಂದಿಗೂ ನಿಂತಿದೆ.
ಸಂಗೀತಪ್ರೇಮಿ ಸುಲ್ತಾನ – ಇಬ್ರಾಹಿಂ ಆದಿಲ್ ಷಾ II
ಸ್ವತಃ ಕವಿ ಮತ್ತು ಸಂಗೀತಗಾರನಾಗಿದ್ದ ಸುಲ್ತಾನ, ತನ್ನ ಆಸ್ಥಾನದಲ್ಲಿ ಸಾವಿರಾರು ಕಲಾವಿದರಿಗೆ ಆಶ್ರಯ ನೀಡಿದ್ದ. ಧರ್ಮಭೇದವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಂಡಿದ್ದ ಕಾರಣ ಜನರು ಅವರಿಗೆ “ಜಗದ್ಗುರು ಬಾದಷಾ” ಎಂಬ ಬಿರುದು ನೀಡಿದ್ದರು.
ಇದನ್ನೂ ಓದಿ: ತಾಜ್ ಮಹಲ್‌ಗೂ ಮುಂಚೆ ಕಟ್ಟಿದ ಅದ್ಭುತ ಇಬ್ರಾಹಿಂ ರೋಜಾ
![]() |
| ಸಂಗೀತ್ ಮಹಲ್ ಸಂಪರ್ಕಿಸುವ ತೊರವಿ ರಸ್ತೆ |
ನವರಸಪುರ: ಸಂಗೀತಕ್ಕೆ ಅರ್ಪಿಸಿದ ರಾಜಧಾನಿ
ಸಂಗೀತದ ಮೇಲಿನ ಅಪಾರ ಪ್ರೀತಿಯಿಂದ ಪ್ರೇರಿತನಾದ ಸುಲ್ತಾನ ಇಬ್ರಾಹಿಂ, ವಿಜಯಪುರ ಹೊರಭಾಗದಲ್ಲಿ ನವರಸಪುರ ಎಂಬ ಹೊಸ ರಾಜಧಾನಿಯನ್ನು ನಿರ್ಮಿಸಲು ಮುಂದಾದ. ತನ್ನ ಆಸ್ಥಾನದಲ್ಲಿದ್ದ ನವಾಬ್ ಶಾಹಜ್ ಖಾನ್ ಅವರಿಗೆ ಈ ಕಾರ್ಯದ ಜವಾಬ್ದಾರಿಯನ್ನು ನೀಡಿದನು. ಇತಿಹಾಸದ ಪ್ರಕಾರ, ಸುಮಾರು 20 ಸಾವಿರ ಜನರು ಈ ಹೊಸ ರಾಜಧಾನಿಯ ನಿರ್ಮಾಣ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ನವರಸಪುರದ ಪ್ರಮುಖ ಆಕರ್ಷಣೆಗಳಾಗಿ ಸಂಗೀತ ಮಹಲ್ ಮತ್ತು ನಾರಿ ಮಹಲ್ ನಿರ್ಮಿಸಲಾಯಿತು. ಇವು ಸಂಗೀತ ಮತ್ತು ನೃತ್ಯಕಲೆಗಳಿಗೆ ಮೀಸಲಾದ ವಿಶಿಷ್ಟ ಅರಮನೆಗಳಾಗಿದ್ದವು.
![]() |
| ವಿಜಯಪುರದ ಸಂಗೀತ್ ಮಹಲ್ ಅರಮನೆ |
ಸಂಗೀತ ಮಹಲ್: ಕಲಾವಿದರ ಅರಮನೆ
ಸುಲ್ತಾನ ಇಬ್ರಾಹಿಂ ಆದಿಲ್ ಷಾ ತನ್ನ ಆಸ್ಥಾನದಲ್ಲಿ ಸುಮಾರು 3000 ಕಲಾವಿದರಿಗೆ ಆಶ್ರಯ ನೀಡಿದ್ದ. ದೇಶ-ವಿದೇಶಗಳಿಂದ ಬಂದ ಕಲಾವಿದರು ಇಲ್ಲಿ ವಾಸಿಸಿ ಸಂಗೀತ ಹಾಗೂ ನೃತ್ಯ ಕಛೇರಿಗಳಲ್ಲಿ ಭಾಗವಹಿಸುತ್ತಿದ್ದರು. ಈ ಕಲಾವಿದರಿಗೆ ಆಶ್ರಯ ನೀಡಲು ಹಾಗೂ ಸಂಗೀತ ಸಮಾರಂಭಗಳನ್ನು ನಡೆಸಲು ಈ ಭವ್ಯ ಅರಮನೆ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ.
ಅರಮನೆಯ ಸಭಾಂಗಣದಲ್ಲಿ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳು ನಡೆಯುತ್ತಿದ್ದವು. ಸುಲ್ತಾನ ಕಲಾವಿದರಿಗೆ ಬಹುಮಾನಗಳು, ಗೌರವ ಮತ್ತು ಪ್ರೋತ್ಸಾಹ ನೀಡುತ್ತಿದ್ದ. ರಾಜಮನೆತನದವರು ವಿಶೇಷ ಗ್ಯಾಲರಿಯಿಂದ ಈ ಪ್ರದರ್ಶನಗಳನ್ನು ವೀಕ್ಷಿಸುತ್ತಿದ್ದರು.
ಇದನ್ನೂ ಓದಿ: ಕುಮಟಗಿ ಬೇಸಿಗೆ ಅರಮನೆ; 400 ವರ್ಷಗಳ ಹಿಂದಿನ ರಾಜರ ರೆಸಾರ್ಟ್!
![]() |
| ಸಂಗೀತ್ ಮಹಲ್ ಮತ್ತು ನಾರಿ ಮಹಲ್ ವಿಹಂಗಮ ನೋಟ |
ವಾಸ್ತುಶಿಲ್ಪ ಮತ್ತು ಇಂದಿನ ಸ್ಥಿತಿ
ವಿಶಾಲ ಮೈದಾನದಲ್ಲಿರುವ ಸಂಗೀತ ಮಹಲ್ ಸುತ್ತಲೂ ದೊಡ್ಡ ತಡೆಗೋಡೆ ನಿರ್ಮಿಸಲಾಗಿದೆ. ಇದಕ್ಕೆ ಒಂಬತ್ತು ದ್ವಾರಗಳಿವೆ. ದರ್ಬಾರ್ ಹಾಲ್, ಕೊಠಡಿಗಳು, ಸ್ನಾನಗೃಹಗಳು ಸೇರಿದಂತೆ ಕಲಾವಿದರಿಗೆ ಅಗತ್ಯವಾದ ಸೌಲಭ್ಯಗಳಿದ್ದವು.
ಕಾಲಕ್ರಮೇಣ ಅರಮನೆಯ ಮೇಲ್ಛಾವಣಿ ಕುಸಿದು ಹೋಗಿದೆ. ಅದರ ಮೂಲ ಸ್ವರೂಪ ಇಂದು ಸಂಪೂರ್ಣವಾಗಿ ಕಾಣಿಸುವುದಿಲ್ಲ. ಕೆಲವು ಗೋಡೆಗಳು ಶಿಥಿಲಗೊಂಡಿದ್ದು, ಅನೇಕ ಭಾಗಗಳು ಪಾಳುಬಿದ್ದಿವೆ. ಆದರೆ ಬೃಹತ್ ಕಮಾನುಗಳು ಇಂದಿಗೂ ಭವ್ಯವಾಗಿ ನಿಂತಿವೆ. ಮೇಲ್ಛಾವಣಿ ಸಂಪೂರ್ಣ ಕುಸಿಯದಂತೆ ಬ್ರಿಟಿಷರ ಕಾಲದಲ್ಲಿ ಎರಡು ಆಧಾರಸ್ತಂಭಗಳನ್ನು ನಿರ್ಮಿಸಲಾಗಿದೆ.
ಸಂಗೀತ ಮಹಲ್ ಪಕ್ಕದಲ್ಲಿರುವ ನಾರಿ ಮಹಲ್‌ನಲ್ಲಿ ಮಹಿಳಾ ಕಲಾವಿದರಿಗೆ ವಾಸ ವ್ಯವಸ್ಥೆ ಮಾಡಲಾಗಿತ್ತು. ಆದರೆ ಇಂದು ಅದರ ಬಹುತೇಕ ಗೋಡೆಗಳು ಬಿದ್ದಿದ್ದು, ಕೆಲವೇ ಅವಶೇಷಗಳು ಉಳಿದಿವೆ.
![]() |
| ಸಂಗೀತ್ ಮಹಲ್ ಒಳಾಂಗಣ ದೃಶ್ಯ |
ಹೊಂಡ, ಸುರಂಗ ಮತ್ತು ಜನಪದ ನಂಬಿಕೆಗಳು
ಅರಮನೆಯ ಮುಂಭಾಗದಲ್ಲಿರುವ ದೊಡ್ಡ ಹೊಂಡದಲ್ಲಿ ನೀರು ತುಂಬಿದಾಗ ಸಂಗೀತ ಮಹಲ್‌ನ ಪ್ರತಿಬಿಂಬ ಅತ್ಯಂತ ಮನಮೋಹಕವಾಗಿ ಕಾಣುತ್ತದೆ. ಈ ಕಾರಣದಿಂದ ಸ್ಥಳೀಯ ಯುವಕರು, ಯುವತಿಯರು ಹಾಗೂ ಛಾಯಾಗ್ರಾಹಕರಿಗೆ ಇದು ನೆಚ್ಚಿನ ತಾಣವಾಗಿದೆ.
ಸ್ಥಳೀಯರ ಪ್ರಕಾರ, ಸಂಗೀತ ಮಹಲ್‌ನಿಂದ ಸುಮಾರು 6 ಕಿ.ಮೀ ದೂರದಲ್ಲಿರುವ ಇಬ್ರಾಹಿಂ ರೋಜಾವರೆಗೆ ಸುರಂಗ ಮಾರ್ಗವಿತ್ತು ಎನ್ನಲಾಗುತ್ತದೆ. ಆದರೆ ಇದಕ್ಕೆ ಇತಿಹಾಸಾತ್ಮಕ ಪುರಾವೆ ಇನ್ನೂ ಸಿಕ್ಕಿಲ್ಲ.
ನವರಸ ಮತ್ತು ಸಂಗೀತದ ಮಹತ್ವ
ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ನೃತ್ಯದಲ್ಲಿ ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಭೀಭತ್ಸ, ಅದ್ಭುತ ಮತ್ತು ಶಾಂತ ಎಂಬ ನವ ರಸಗಳಿಗೆ ಮಹತ್ವವಿದೆ. ಇಬ್ರಾಹಿಂ ಆದಿಲ್ ಷಾಗೆ ಸಂಗೀತದ ಮೇಲಿದ್ದ ಪ್ರೀತಿಯ ಪ್ರತಿಫಲವೇ ನವರಸಪುರ.
ಅವನು ತನ್ನ ಹೊಸ ರಾಜಧಾನಿಗೆ ನವರಸಪುರ ಎಂದು ಹೆಸರು ಇಟ್ಟಿದ್ದ. ಸ್ವತಃ ‘ಕಿತಾಬ್-ಎ-ನವರಸ್’ ಎಂಬ ಸಂಗೀತ ಕೃತಿಯನ್ನು ರಚಿಸಿದ್ದ. ಹಿಂದೂ ಧರ್ಮದಲ್ಲಿ ವಿದ್ಯೆ ಮತ್ತು ಸಂಗೀತದ ಅಧಿದೇವತೆಯಾದ ಸರಸ್ವತಿಯನ್ನು ವರ್ಣಿಸುವ ಪದ್ಯದಿಂದ ಈ ಕೃತಿಯನ್ನು ಆರಂಭಿಸಿರುವುದು ವಿಶೇಷ. ಸಂಗೀತಗಾರರ ಪಡೆಯಿಗೆ ‘ಲಷ್ಕರ್-ಎ-ನವರಸ್’ ಎಂದು ಹೆಸರಿಟ್ಟಿದ್ದ. ಇವನ ಪಟ್ಟದ ಆನೆಯ ಹೆಸರು ನವರಸ್ ಪೈಕರ್. ‘ನೌರಸ್ ಮೊಹರ್’ ಎಂಬ ನಾಣ್ಯವನ್ನೂ ಬಿಡುಗಡೆ ಮಾಡಿದ್ದ. ಬಹುಶಃ ಸಂಗೀತಕ್ಕೆ ಇಷ್ಟೊಂದು ಮಹತ್ವ ನೀಡಿದ ದೊರೆ ಇತಿಹಾಸದಲ್ಲಿ ವಿರಳ.
ಇದನ್ನೂ ಓದಿ: ವಿಜಯಪುರ ಮೆಹ್ತರ್ ಮಹಲ್; ಕಣ್ಮನ ಸೆಳೆಯುವ ಶಿಲ್ಪಕಲೆ
![]() |
| ಇಬ್ರಾಹಿಂ ಆದಿಲ್ ಷಾ II (ಕಾಲ್ಪನಿಕ ಚಿತ್ರ) |
ನವರಸಪುರದ ಕನಸಿನ ಅಂತ್ಯ
1624ರಲ್ಲಿ ಸೇನಾಪತಿ ಮಲಿಕ್ ಅಂಬರ್ ನೇತೃತ್ವದ ಅಹಮದನಗರ ನಿಜಾಮಷಾಹಿಗಳು ವಿಜಯಪುರದ ಮೇಲೆ ದಾಳಿ ನಡೆಸಿದರು. ಈ ದಾಳಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ನವರಸಪುರದ ಬಹುತೇಕ ಕಟ್ಟಡಗಳು ನಾಶವಾದವು ಎಂದು ಇತಿಹಾಸ ಹೇಳುತ್ತದೆ. ಇದರೊಂದಿಗೆ ಸುಲ್ತಾನ ಇಬ್ರಾಹಿಂನ ಹೊಸ ರಾಜಧಾನಿಯ ಕನಸು ಕನಸಾಗಿಯೇ ಉಳಿಯಿತು.
ಇಂದಿನ ಸಂಗೀತ ಮಹಲ್
ಭಾರತೀಯ ಪುರಾತತ್ವ ಇಲಾಖೆ ಸಂಗೀತ ಮಹಲ್ ಅನ್ನು ಸಂರಕ್ಷಿತ ಸ್ಮಾರಕವೆಂದು ಘೋಷಿಸಿದೆ. ಇತ್ತೀಚಿನ ವರ್ಷಗಳಲ್ಲಿ ಇಲ್ಲಿ ಸಂಗೀತ ಕಾರ್ಯಕ್ರಮಗಳಿಗಾಗಿ ವೇದಿಕೆ ನಿರ್ಮಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ 1988ರಲ್ಲಿ ನವರಸಪುರ ಸಂಗೀತ ಉತ್ಸವ ಆರಂಭವಾಯಿತು. ನಂತರ 2005, 2006, 2011 ಮತ್ತು 2015ರಲ್ಲಿ ಸಂಗೀತ ಉತ್ಸವಗಳು ಇಲ್ಲಿ ನಡೆದಿವೆ. ಅರಮನೆಯನ್ನು ಅಭಿವೃದ್ಧಿಪಡಿಸಿ ಪ್ರತಿ ವರ್ಷ ನವರಸಪುರ ಉತ್ಸವವನ್ನು ನಡೆಸಬೇಕು ಎಂಬುದು ವಿಜಯಪುರ ಜನರ ಬಹುದಿನಗಳ ಬೇಡಿಕೆಯಾಗಿದೆ.
ವಿಜಯಪುರ ಕೇಂದ್ರ ಬಸ್ ನಿಲ್ದಾಣದಿಂದ ಸುಮಾರು 7 ಕಿ.ಮೀ ದೂರದಲ್ಲಿರುವ ಈ ಸಂಗೀತ ಮಹಲ್ ತೊರವಿ ಗ್ರಾಮದ ಸಮೀಪದಲ್ಲಿದೆ. ಹೆದ್ದಾರಿ ಪಕ್ಕದಲ್ಲೇ ಇರುವುದರಿಂದ ಬಸ್ ಮತ್ತು ಆಟೋ ಸೌಲಭ್ಯ ಸುಲಭವಾಗಿದೆ. ಇಲ್ಲಿ ಪ್ರವೇಶಕ್ಕೆ ಯಾವುದೇ ಶುಲ್ಕವಿಲ್ಲ. ವಿಜಯಪುರಕ್ಕೆ ಬಂದಾಗ, ಈ ಸಂಗೀತಪ್ರೇಮದ ಮೌನ ಸಾಕ್ಷಿಯಾದ ಸಂಗೀತ ಮಹಲ್ ನೋಡೋದನ್ನು ಮಾತ್ರ ಮರೆಯಬೇಡಿ.





